ತುಮಕೂರು | ಇಂದು ನಾಡಿನಲ್ಲೆಡೆ ನವರಾತ್ರಿಯ ಸಂಭ್ರಮ, ಹಲವು ದೇವಾಲಯಗಳಲ್ಲಿ ವಿಭಿನ್ನ ರೀತಿಯ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ವಿಶೇಷ ಅಲಂಕಾರಗಳು ನಡೆಯುತ್ತಿವೆ. ಅದೇ ರೀತಿಯಾಗಿ ತುಮಕೂರು ಗ್ರಾಮಾಂತರ ಪ್ರದೇಶದ ದೇಗುಲವೊಂದರಲ್ಲಿ ಅಡಿಕೆ ಮತ್ತು ವೀಳ್ಯದೆಲೆಯಿಂದ ಅಲಂಕಾರ ಮಾಡಲಾಗಿದ್ದು ಭಕ್ತರ ಕಣ್ಮನ ಸೆಳೆದಿದೆ.
ಹೌದು,, ತುಮಕೂರು ಗ್ರಾಮಾಂತರ ಪ್ರದೇಶದ ದೊಡ್ಡ ನಾರವಂಗಲದಲ್ಲಿ ನವರಾತ್ರಿ ಪ್ರಯುಕ್ತ ಬುಗುಡನಹಳ್ಳಿಯ ಅಗ್ನಿವಂಶ ಕ್ಷತ್ರಿಯ ತಿಗಳ ಸಮುದಾಯದ ಕುಲಬಾಂಧವರು ಶ್ರೀರಾಮ ದೇಗುಲದಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣ ದೇವರಿಗೆ ವಿಶೇಷವಾಗಿ ಅಡಿಕೆ ಮತ್ತು ವೀಳ್ಯದೆಲೆಯಿಂದ ಅಲಂಕಾರ ಮಾಡಿದ್ದರು.
ಅಡಿಕೆ ಮತ್ತು ವೀಳ್ಯದೆಲೆ ಕೃಷಿಗೆ ಹೆಸರುವಾಸಿಯಾಗಿರುವ ಅಗ್ನಿವಂಶ ಕ್ಷತ್ರಿಯ ತಿಗಳ ಸಮುದಾಯದವರು ಇದೀಗ ಅಡಿಕೆ ಮತ್ತು ವೀಳ್ಯದೆಲೆಯ ಸೀಸನ್ ಆಗಿರುವುದರಿಂದ ನವರಾತ್ರಿಯ ಹಿನ್ನೆಲೆಯಲ್ಲಿ ಇಂತಹ ಒಂದು ವಿಶೇಷ ಅಲಂಕಾರಕ್ಕೆ ಮುಂದಾಗಿದ್ದಾರೆ.
ದೇವಾಲಯವು ಹಚ್ಚಹಸಿರಿನ ವೀಳ್ಯದೆಲೆ ಮತ್ತು ಹಸಿ ಅಡಿಕೆಯ ಗೊನೆಗಳು, ಜೊತೆಗೆ ಒಣಗಿದ ಅಡಿಕೆ ರಾಶಿಯಿಂದ ಕಂಗೊಳಿಸುತ್ತಿತ್ತು. ಇದೆ ವೇಳೆ ವಿಶೇಷ ಪೂಜೆಯನ್ನು ನಡೆಸಲಾಗಿದ್ದು ನಾಡಿನ ಜನತೆಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಲಾಗಿದೆ.