ಬೆಂಗಳೂರು | 28ರ ಹರೆಯದ ಬೆಸ್ಕಾಂ ಲೈನ್ಮ್ಯಾನ್ ಸೋಮವಾರ ಗೋಪಾಲಪುರ ಪೊಲೀಸ್ ಚೌಕಿ ಬಳಿ ಟ್ರಾನ್ಸ್ಫಾರ್ಮರ್ ದುರಸ್ತಿ ಮಾಡುವ ವೇಳೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.
ಸುಂಕದಕಟ್ಟೆ ನಿವಾಸಿ ಗೌತಮ್ ಮತ್ತು ಮಾಗಡಿ ರಸ್ತೆಯ ಅಂಜನಾ ಟಾಕೀಸ್ ಬಳಿಯ ಬೆಸ್ಕಾಂ ಕಚೇರಿಗೆ ಸೇರಿದ ಇಬ್ಬರು ಸಹೋದ್ಯೋಗಿಗಳು ಭಾನುವಾರದಿಂದ ರಾತ್ರಿ ಕರ್ತವ್ಯದಲ್ಲಿದ್ದರು. ಟ್ರಾನ್ಸ್ಫಾರ್ಮರ್ನಿಂದ ಕಿಡಿ ಬಿದ್ದಿರುವ ಬಗ್ಗೆ ಬೆಸ್ಕಾಂ ಸಹಾಯವಾಣಿಗೆ ಕರೆ ಬಂದ ಹಿನ್ನೆಲೆಯಲ್ಲಿ ಮೂವರು ಬೆಳಗ್ಗೆ 9 ಗಂಟೆ ಸುಮಾರಿಗೆ ಸ್ಥಳಕ್ಕೆ ತೆರಳಿದ್ದಾರೆ.
ಗೌತಮ್ ಕಂಬವನ್ನು ಹತ್ತಿ ಪರಿಶೀಲನೆ ನಡೆಸುತ್ತಿದದ್ರು ಈ ವೇಳೆ ಅವಘಡ ಸಂಭವಿಸಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಗೌತಮ್ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ಮಾಗಡಿ ರಸ್ತೆ ಪೊಲೀಸರು ಕಾರ್ಯನಿರ್ವಾಹಕ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಜೂನಿಯರ್ ಇಂಜಿನಿಯರ್ ವಿರುದ್ಧ ನಿರ್ಲಕ್ಷದಿಂದ ಸಾವಿಗೆ ಕಾರಣವಾದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.