Commercial Taxes Department | ಅಡಿಕೆ ಬೆಳೆಗಾರರಿಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯಿಂದ ಕಿರುಕುಳ..!

0
41

ಶಿರಾ |  ವಾರದಿಂದ ನಿಂತಲ್ಲೇ ನಿಂತ ಕ್ಯಾಂಟರ್ ವಾಹನ. ವಾಹನದ ಒಳಗೆ ಲಕ್ಷಾಂತರ ರೂ, ಮೌಲ್ಯದ ಅಡಿಕೆ ಬೆಳೆ ಕೂಡ ಗುಣಮಟ್ಟ ಕುಸಿಯುವ ಆತಂಕ. ಇಷ್ಟೆಲ್ಲಾ ಆತಂಕ್ಕೆ ಕಾರಣ ಕಾನೂನು ಹೆಸರಿನಲ್ಲಿ ರೈತರಿಗೆ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಗಳು ಕೊಟ್ಟ ಕಿರುಕುಳದ ಆರೋಪ. ದೊಡ್ಡಬಳ್ಳಾಪುರ ತಾಲ್ಲೂಕಿನ ರೈತ ರವಿಕುಮಾರ್ ಗೌಡ ಹಾಗೂ ಪ್ರತಾಪ್, ಚಿಕ್ಕಬೆಳವಂಗಲ ಗ್ರಾಮದಿಂದ ಚಿತ್ರದುರ್ಗದ ಭೀಮಸಂದ್ರ ಮಾರುಕಟ್ಟೆಗೆ ಅಡಿಕೆ ಮಾರಾಟಕ್ಕೆ ಕ್ಯಾಂಟರ್ನಲ್ಲಿ ತೆರಳುತಿದ್ದರು. ಕಳೆದ ಶನಿವಾರ ತುಮಕೂರಿನ ಶಿರಾ ಬಳಿ ಅಡಿಕೆ ಸಾಗಿಸುತ್ತಿದ್ದ ವಾಹನ ಜಪ್ತಿ ಮಾಡಲಾಗಿತ್ತು. 33 ಲಕ್ಷ ರೂ. ಬೆಲೆಬಾಳುವ ಅಡಿಕೆಗೆ 45 ಲಕ್ಷ ರೂ. ಟ್ಯಾಕ್ಸ್ ಕಟ್ಟುವಂತೆ ವಾಣಿಜ್ಯ ತೆರಿಗೆ ಅಧಿಕಾರಿಗಳು ರೈತರಿಗೆ ಕಿರುಕುಳ ಕೊಡ್ತಿದ್ದಾರಂತೆ.

ಕ್ಯಾಂಟರ್ನಲ್ಲಿ 105 ಚೀಲ ಅಡಿಕೆ ಸಾಗಿಸಲಾಗುತ್ತಿತ್ತು. ರೈತ ರವಿಕುಮಾರ್ಗೆ ಸೇರಿದ 60 ಅಡಿಕೆ ಚೀಲ, ಪ್ರತಾಪ್ಗೆ ಸೇರಿದ 45 ಅಡಿಕೆ ಚೀಲಗಳು ವಾಹನದಲ್ಲಿತ್ತು. ಈ ವೇಳೆ ಕ್ಯಾಂಟರ್ ತಡೆದು ತಪಾಸಣೆ ನಡೆಸಿದ್ದ ವಾಣಿಜ್ಯ ತೆರಿಗೆ ಅಧಿಕಾರಿಗಳು. ರೈತನಿಗೆ ಪಹಣಿ ತಂದು ತೋರಿಸುವಂತೆ ಕೇಳಿದ್ದರು. ಇಷ್ಟು ಸಾಲದು ಅನ್ನುವಂತೆ ಕಳೆದ ಸೋಮವಾರ ಚಿಕ್ಕಬೆಳವಂಗಲ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಇಬ್ಬರ ಮನೆ ಹಾಗೂ ತೋಟದಲ್ಲಿ ಪರಿಶೀಲನೆ ನಡೆಸಿದರು. ಪರಿಶೀಲನೆ ಬಳಿಕವೂ ಮೂರು ಬಾರಿ ಪಹಣಿ ನೀಡಿದ್ರು, ಅಡಿಕೆ ತುಂಬಿದ್ದ ಕ್ಯಾಂಟರ್ ಬಿಡಲು ಅಧಿಕಾರಿಗಳು ಮನಸ್ಸು ಮಾಡಿಲ್ಲ. ತುಮಕೂರಿನ ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಬಳಿ ಇರುವ ಕ್ಯಾಂಟರ್ ವಾಹನ ಬಿಡಲು 10 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿರುವ ಆರೋಪ ನೊಂದ ರೈತರಿಂದ ಕೇಳಿ ಬಂದಿದೆ.

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಮುಕುಂದ್ ಕುಲಕರ್ಣಿ ನೇತೃತ್ವದ ತಂಡ ಕ್ಯಾಂಟರ್ ವಾಹನವನ್ನ ಜಪ್ತಿ ಮಾಡಿತ್ತು. ಬಳಿಕ ವೇ ಬ್ರಿಡ್ಜ್ನಲ್ಲಿ ತೂಕ ಹಾಕಿಸಲಾಗಿತ್ತು. ನಿನ್ನದೇ ಅಡಿಕೆ ಅನ್ನೋದಿಕ್ಕೆ ಏನ್ ಫ್ರೂಪ್ ಅಂತ ಆವಾಜ್ ಬಿಟ್ಟಿದ್ದಾರೆ. ಕ್ಯಾಂಟರ್ನಿದ್ದ 33 ಲಕ್ಷ ರೂ,. ಬೆಲೆಬಾಳುವ 80 ಕ್ವಿಂಟಲ್ ಅಡಿಕೆಗೆ 45 ಲಕ್ಷ ರೂ. ಟ್ಯಾಕ್ಸ್ ಕಟ್ಟುವಂತೆ ಥಮಿಕಿ ಹಾಕಿದ್ದಾರೆ. ನಿಂತಲ್ಲೇ ನಿಂತ ಕ್ಯಾಂಟರ್ನಿಂದ ಅಡಿಕೆ ತೂಕ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕ್ವಿಂಟಲ್ಗೆ 45 ಸಾವಿರ ಇದ್ದ ರೇಟ್, ಈ ವಾರ 42 ಸಾವಿರಕ್ಕೆ ಇಳಿಕೆಯಾಗಿದೆ. ಪರಿಣಾಮ ನಾಲ್ಕೈದು ಲಕ್ಷ ರೂ.ನಷ್ಟವಾಗಿದೆ. ನಷ್ಟದ ಆ ಹಣವನ್ನ ನಮಗೆ ಯಾರು ಕೊಡ್ತಾರೆ. ನಮ್ಮ ಅಡಿಕೆ ಕೊಟ್ಟಿಲ್ಲ ಅಂದ್ರೆ ಆತ್ಮಹತ್ಯೆಯೇ ದಾರಿ ಎಂದು ಕಣ್ಣಿರಿಡುತಿರುವ ರೈತರಿಗೆ ವಾಣಿಜ್ಯ ಇಲಾಖೆ ಕಚೇರಿ ಅಲೆದಾಟವೂ ತಪ್ಪುತ್ತಿಲ್ಲ.