“ನನಗೆ ಲಂಚ ಕೊಡಬೇಕಾಗಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆ” – ಸಿದ್ಧರಾಮಯ್ಯ ಲೇವಡಿ

0
37

ಬೆಂಗಳೂರು | “ನನಗೆ ಲಂಚ ಕೊಡಬೇಕಾಗಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆ” ಎಂದು ಸರ್ಕಾರಿ ಕಚೇರಿಗಳಲ್ಲಿ ರಾಜ್ಯ ಸರ್ಕಾರ ಬೋರ್ಡ್ ಹಾಕಿಸುತ್ತಂತೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ, ಮೊದಲು ನಿಮ್ಮ ಮತ್ತು ಸಚಿವರ ಕಚೇರಿಗಳು ಹಾಗೂ ಮನೆ ಮುಂದೆ ಈ ಬೋರ್ಡ್ ಹಾಕಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಲೇವಡಿ ಮಾಡಿದ್ದಾರೆ.

ಸರ್ಕಾರಿ ಗುತ್ತಿಗೆದಾರರು ಲಂಚದ ಆರೋಪ ಮಾಡಿರುವುದು ಸಚಿವರ ಮೇಲೆ, ಅಧಿಕಾರಿಗಳ ಮೇಲೆ ಅಲ್ಲ. ಅಧಿಕಾರಿಗಳನ್ನು ತೋರಿಸಿ ಲಂಚ/ಕಮಿಷನ್ ಆರೋಪದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಬೇಡ. ಲಂಚಾವತಾರ ನಾಟಕದಲ್ಲಿ ಅಧಿಕಾರಿಗಳದ್ದು ಪೋಷಕ ಪಾತ್ರ, ಇಲಾಖಾ ಸಚಿವರದ್ದೇ ಮುಖ್ಯ ಪಾತ್ರ ಎಂದಿದ್ದಾರೆ.

ಸಚಿವರಿಂದ ರಕ್ಷಣೆಯ ಅಭಯ ಇಲ್ಲದೆ ಯಾವ ಅಧಿಕಾರಿಯೂ ಲಂಚಕ್ಕೆ ಕೈಯೊಡ್ಡುವ ಸಾಹಸ ಮಾಡುವುದಿಲ್ಲ. ಸಚಿವರು ಪ್ರಾಮಾಣಿಕವಾಗಿದ್ದಾಗ ಸರ್ಕಾರಿ ಅಧಿಕಾರಿಗಳು ಕೂಡಾ ಪ್ರಾಮಾಣಿಕವಾಗಿರುತ್ತಾರೆ. ಸಚಿವರು ಭ್ರಷ್ಟರಾದಾಗ ‘ಯಥಾ ರಾಜಾ ತಥಾ ಪ್ರಜಾ’ ಅಷ್ಟೆ.

ಸನ್ಮಾನ್ಯ ಮುಖ್ಯಮಂತ್ರಿಗಳೇ, ಈ ಬೋರ್ಡ್ ಬರೆಸಿ ಹಾಕುವ ನಾಟಕಗಳನ್ನೆಲ್ಲ ನಿಲ್ಲಿಸಿ. ಮೊದಲು 40% ಕಮಿಷನ್ ಆರೋಪವೂ ಸೇರಿದಂತೆ ಸಚಿವರುಗಳ ಮೇಲಿನ ಭ್ರಷ್ಟಾಚಾರದ ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ಹೊರಡಿಸಿ.

ಸರ್ಕಾರಿ ಕಚೇರಿಗಳಲ್ಲಿ  “ಲಂಚ ಕೊಡಬೇಕಾಗಿಲ್ಲ” ಎಂಬ ಬೋರ್ಡ್ ಅಳವಡಿಸುವ ಮೊದಲು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ. ನೊಂದ ಜನರು ದೂರು ಕೊಟ್ಟರೆ ಭ್ರಷ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಿ ಎಂದು ಹೇಳಿದ್ದಾರೆ.